ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿಯೇ ತಾಲೂಕಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಆಗ್ರಹ
ಯಾದಗಿರಿ : ಶಹಾಪುರ ನಗರದ ಹೃದಯ ಭಾಗದಿಂದ ಸುಮಾರು ೪-೫ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ “ಪ್ರಜಾ ಸೌಧ” ನಿರ್ಮಿಸಲು ಸರ್ಕಾರ ನಡೆಸುತ್ತಿರುವ ಸಿದ್ಧತೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ನಗರ ಮಧ್ಯಭಾಗದಲ್ಲಿರುವ ಹಳೆಯ ತಹಶೀಲ್ ಕಚೇರಿಯ ೪ ಎಕರೆ ವಿಸ್ತೀರ್ಣದ ಜಾಗದಲ್ಲಿಯೇ ತಾಲೂಕಾಡಳಿತ ಸಂಕೀರ್ಣ ನಿರ್ಮಿಸಬೇಕು ಎಂದು ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ (ರಿ.) ಶಹಾಪುರ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಸಂಘದ ತಾಲೂಕು ಅಧ್ಯಕ್ಷ ಪ್ರದೀಪ ಅಣಬಿ ಅವರು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರನೇ ಬಾರಿ ಸವಿವರ ಮನವಿ ಸಲ್ಲಿಸಿದ್ದು, ಸಾರ್ವಜನಿಕರ ಅನುಕೂಲತೆ ಕಡೆಗಣಿಸಿ ತೆಗೆದುಕೊಳ್ಳಲಾಗುತ್ತಿರುವ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
ಸಂಘದ ಪ್ರಕಾರ, ಶಹಾಪುರ ನಗರದ ಹಳೆಯ ತಹಶೀಲ್ ಕಾರ್ಯಾಲಯವು ೧೯೬೭ರಿಂದ ೨೦೧೫ರವರೆಗೆ ಯಾವುದೇ ಸಮಸ್ಯೆಯಿಲ್ಲದೆ ಕಾರ್ಯ ನಿರ್ವಹಿಸಿತ್ತು. ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಸ್ಥಳ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ತಲುಪುವಂತಿದ್ದು, ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿತ್ತು. ಆದರೆ ಬಳಿಕ ನಗರದಿಂದ ದೂರದಲ್ಲಿರುವ ಪ್ರದೇಶಕ್ಕೆ ತಹಸೀಲ್ ಕಚೇರಿ ಸ್ಥಳಾಂತರಗೊಂಡ ಕಾರಣ ಗ್ರಾಮೀಣ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಹೊಸ “ಪ್ರಜಾ ಸೌಧ” ಕಟ್ಟಡವನ್ನು ಸಹ ನಗರದ ಹೊರವಲಯದಲ್ಲಿರುವ ಸರ್ಕಾರಿ ಕಾಲೇಜು ಆವರಣದಲ್ಲಿ ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಸಂಘ ಹೇಳಿದೆ. ತಾಲೂಕಿನ ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರು ಬಸ್ ಮೂಲಕ ನಗರಕ್ಕೆ ಬಂದ ನಂತರ ಮತ್ತೆ ಆಟೋ ಅವಲಂಬಿಸಬೇಕಾಗುತ್ತದೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಆಟೋಗಳಿಗೆ ರೂ.೮೦ ರಿಂದ ೧೦೦ರವರೆಗೆ ಖರ್ಚಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಮಯಕ್ಕೆ ವಾಹನ ಸಿಗದ ಕಾರಣ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದ್ದು, ಕೆಲವೊಮ್ಮೆ ಅಧಿಕಾರಿಗಳು ಸಿಗದೆ ಸಾರ್ವಜನಿಕರು ಲಾಡ್ಜ್ ಗಳಲ್ಲಿ ತಂಗಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಸಂಘ ದೂರಿದೆ. ಬಡ ಗ್ರಾಮೀಣ ಜನರಿಗೆ ಇದು ಅನ್ಯಾಯಕರ ಪರಿಸ್ಥಿತಿಯಾಗಿದೆ ಎಂದು ತಿಳಿಸಿದೆ.
ಹೊಸ ಸ್ಥಳದ ಆಯ್ಕೆಯಲ್ಲಿ ಪರೋಕ್ಷ ಅವ್ಯವಹಾರದ ಅನುಮಾನವೂ ಇದೆ ಎಂದು ಸಂಘ ಆರೋಪಿಸಿದ್ದು, ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದೆ.
ಹಳೆಯ ತಹಶೀಲ್ ಜಾಗವು ನಗರದ ಮಧ್ಯಭಾಗದಲ್ಲಿದ್ದು, ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಶಹಾಪುರ ರೈಲು ನಿಲ್ದಾಣಕ್ಕೂ ಉತ್ತಮ ಸಂಪರ್ಕ ಹೊಂದಿರುವುದರಿಂದ ಅದೇ ಸ್ಥಳದಲ್ಲಿ “ಪ್ರಜಾ ಸೌಧ” ನಿರ್ಮಿಸಿದರೆ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಈ ವಿಷಯ ಕುರಿತು ಈಗಾಗಲೇ ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದರೂ ಇನ್ನೂ ಸ್ಪಂದನೆ ದೊರೆತಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಆದ್ದರಿಂದ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ, ಪ್ರಸ್ತಾವಿತ ಹೊಸ ಸ್ಥಳದ ಆದೇಶವನ್ನು ರದ್ದುಪಡಿಸಿ, ಹಳೆಯ ತಹಸೀಲ್ ಆವರಣದಲ್ಲಿಯೇ ಆಧುನಿಕ “ಪ್ರಜಾ ಸೌಧ” ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ಒತ್ತಾಯಿಸಿದೆ.
- ಕರುನಾಡ ಕಂದ ಸುದ್ದಿ




















