ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕಂಪಲಿರಾಯ ಆಟೋ ನಿಲ್ದಾಣವನ್ನು ಶಾಸಕ ಜೆ.ಎನ್.ಗಣೇಶ ಸೋಮವಾರ ಉದ್ಘಾಟಿಸಿದರು.
ಮೊದಲಿಗೆ ಹಳೇ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್ ಬಳಿಯಲ್ಲಿ ಶಾಸಕ ಗಣೇಶ ಅವರನ್ನು ಆಟೋ ಚಾಲಕರು ಅದ್ಧೂರಿಯಾಗಿ ಸ್ವಾಗತಿಸಿ, ನಂತರ ಶಾಸಕ ಗಣೇಶ ಅವರು ಆಟೋ ಓಡಿಸುವ ಮೂಲಕ ಹೊಸ ಬಸ್ ನಿಲ್ದಾಣ ಬಳಿಯ ನೂತನ ಆಟೋ ನಿಲ್ದಾಣಕ್ಕೆ ಆಗಮಿಸಿ, ನಂತರ ವಿಜೃಂಭಣೆಯಿಂದ ಉದ್ಘಾಟಿಸಿದರು.
ತದ ನಂತರ ಶಾಸಕ ಗಣೇಶ ಮಾತನಾಡಿ, ಹಳೇ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಹೆಚ್ಚುವರಿಯಾಗಿ ಮತ್ತೊಂದು ಆಟೋ ನಿಲ್ದಾಣವನ್ನು ಸುಸಜ್ಜಿತವಾಗಿ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಮಿಕ ವರ್ಗದ ಜನರಿಗಾಗಿ ಸಚಿವ ಸಂತೋಷ್ ಲಾಡ್ ಅವರು ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ದಿನನಿತ್ಯದ ದುಡಿಮೆಯ ಆಧಾರದ ಮೇಲೆ ಜೀವನ ನಡೆಯುತ್ತಿದೆ. ಮಕ್ಕಳಿಗೆ ಶಿಕ್ಷಣ ಮತ್ತು ಕುಟುಂಬದ ಹಿರಿಯರಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. ಇಂತಹ ಕಷ್ಟದಲ್ಲಿ ಕಾರ್ಮಿಕರು ಬದುಕು ನಡೆಸುತ್ತಿದ್ದಾರೆ. ಆರ್‌ಟಿಒ ಬದಲಿಗೆ ಆಟೋ ಚಾಲಕರ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಗೆ ವಹಿಸಬೇಕು ಎಂಬುದು ಚಾಲಕರ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ. ಆದ್ದರಿಂದ ಕಾರ್ಮಿಕರ ಸಚಿವರ ಗಮನಕ್ಕೆ ತಂದು ಆಟೋ ಚಾಲಕರ ಜವಾಬ್ದಾರಿಗಳನ್ನು ಕಾರ್ಮಿಕ ಇಲಾಖೆಗೆ ವಹಿಸಲು ಹೆಚ್ಚಿನ ಒತ್ತಡ ಹಾಕಲಾಗುವುದು. ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿವೆ ಎಂದರು.
ಫೆಡರೇಶನ್ ಆಪ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯುನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷ್ ಕುಮಾರ ಮಾತನಾಡಿ, ಕರ್ನಾಟಕ ರಾಜ್ಯ ಮೋಟರ್ ಸಾರಿಗೆ ಹಾಗೂ ಇತರೆ ಸಂಬಂಧಿತ ಕ್ಷೇಮಾಭಿವೃದ್ಧಿ ಕಲ್ಯಾಣ 2024ರಲ್ಲಿ ರಚನೆಗೊಂಡಿದೆ. 20ಕ್ಕೂ ಹೆಚ್ಚು ಸಾರಿಗೆ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಭದ್ರತಾ ಮಂಡಳಿ ನೋಡಿಕೊಳ್ಳುತ್ತಿತ್ತು. ಕಳೆದ 7ರಂದು ನಡೆದ ಕ್ಯಾಬಿನೇಟ್ ಸಭೆಯಲ್ಲಿ ಕಾರ್ಮಿಕ ಇಲಾಖೆ ಕೆಲಸ ಮಾಡುವುರನ್ನು ಏಕಾಏಕಿ ಸಾರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಸಾರಿಗೆ ವಿಭಾಗವನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಸಾರಿಗೆಇಲಾಖೆಯಲ್ಲಿ ಬಹುತೇಕವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಇದರಿಂದ ಆರ್ಟಿದಲ್ಲಿ ಬ್ರೋಕರ್ ಆವಳಿ ಹೆಚ್ಚಾಗುತ್ತದೆ. ಆದ್ದರಿಂದ ಯತ್ತವತ್ತಾಗಿ ಕಾರ್ಮಿಕ ಇಲಾಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಆಟೋ ರಘು ಮಾತನಾಡಿ, ಇಂದಿನ ದಿನಮಾನದಲ್ಲಿ ಆಟೋ ಚಾಲಕರ ಬದುಕು ಕಷ್ಟಕರವಾಗಿದೆ. ಆದ್ದರಿಂದ ಚಾಲಕರಿಗೆ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಆಟೋ ಸಂಘದ ಉಪಾಧ್ಯಕ್ಷ ಪರಶುರಾಮ, ಮುಖಂಡರಾದ ಸುರೇಶ, ರಾಘು, ಸಿಪಾಯಿ ರಾಮ, ಎಸ್.ಪಿ.ಪರಶುರಾಮ, ದೊಡ್ಡಣ್ಣ, ಗಿರೀಶ್, ಬಾಬು, ಮಲ್ಲಿಕಾರ್ಜುನ, ಕೃಷ್ಣ, ಫಯಾಜ್, ಶರ್ಮಾಸ್, ಗೋವಿಂದ, ಚಿರಂಜೀವಿ, ಶಿವುಕುಮಾರ, ವಸಂತ, ಮಂಜುನಾಥ, ನಾಗರಾಜ, ಆಟೋ ರಾಜ, ಸುಧಾಕರ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















