ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಕೋಚ- ಮೆಟ್ಟಿಲೋ? ಸಂಕೋಲೆಯೋ?

” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಸಹಜ ಗುಣ. ಆದರೆ ಹದಮೀರಿದ ಸಂಕೋಚವು ಬದುಕಿನ ದಾರಿಗೆ ಅಡ್ಡಿಯಾಗುವ ಮುಳ್ಳಾಗುತ್ತದೆ.
ಸಂಕೋಚಕ್ಕೆ ಎರಡು ಮುಖಗಳಿವೆ. ಮೊದಲನೆಯದು ಸಾತ್ವಿಕ ಸಂಕೋಚ. ಹಿರಿಯರ ಎದುರು ವಿನಯದಿಂದ ತಲೆಬಾಗುವುದು, ತಪ್ಪು ಮಾಡಿದಾಗ ನಾಚಿಕೆಪಡುವುದು, ಪರರ ಮನಸ್ಸು ನೋಯಿಸಬಾರದು ಎಂದು ಯೋಚಿಸುವುದು – ಇದು ಭಾರತೀಯ ಸಂಸ್ಕೃತಿಯ ಆಭರಣ. ಸ್ವಾಮಿ ವಿವೇಕಾನಂದರು “ವಿನಯವಿಲ್ಲದ ವಿದ್ಯೆ ವ್ಯರ್ಥ” ಎಂದು ಹೇಳಿದ್ದಾರೆ. ಈ ರೀತಿಯ ಸಂಕೋಚದಿಂದ ವ್ಯಕ್ತಿಯ ಘನತೆ ಹೆಚ್ಚುತ್ತದೆ.

ಎರಡನೆಯದು ಮಾರಕ ಸಂಕೋಚ. ಇದು ಮನುಷ್ಯನ ಪ್ರಗತಿಗೆ ದೊಡ್ಡ ಶತ್ರು. ತರಗತಿಯಲ್ಲಿ ಶಿಕ್ಷಕರನ್ನು ಪ್ರಶ್ನೆ ಕೇಳಲು ಸಂಕೋಚ, ವೇದಿಕೆ ಮೇಲೆ ಎರಡು ಮಾತನಾಡಲು ಸಂಕೋಚ, ಸಂದರ್ಶನದಲ್ಲಿ ತನ್ನ ಅರ್ಹತೆ ಹೇಳಿಕೊಳ್ಳಲು ಸಂಕೋಚ – ಇದರಿಂದ ಅದೆಷ್ಟೋ ಚಿನ್ನದಂತಹ ಪ್ರತಿಭೆಗಳು ಮಣ್ಣುಪಾಲಾಗಿವೆ. ಚಾಣಕ್ಯನು “ಅತಿ ವಿನಯಂ ಧೂರ್ತ ಲಕ್ಷಣಂ” ಎಂದು ಎಚ್ಚರಿಸಿದ್ದಾನೆ. ಅಂದರೆ ಅತಿಯಾದ ಸಂಕೋಚವು ಮೋಸ ಹೋಗುವ ಲಕ್ಷಣ.
ಸಂಕೋಚದಿಂದಾಗುವ ದುಷ್ಪರಿಣಾಮ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಕೋಚ ಸ್ವಭಾವದವರು ಹಿಂದೆ ಬೀಳುತ್ತಾರೆ. ಉದ್ಯೋಗ ಸಂದರ್ಶನದಲ್ಲಿ ಬಹಳಷ್ಟು ಅಭ್ಯರ್ಥಿಗಳು ಅನುತ್ತೀರ್ಣರಾಗಲು ಕಾರಣ ತಾಂತ್ರಿಕ ಜ್ಞಾನದ ಕೊರತೆಯಲ್ಲ, ಬದಲಾಗಿ ಸಂಕೋಚದಿಂದ ಸರಿಯಾಗಿ ಉತ್ತರಿಸದಿರುವುದು. ಶಾಲೆಯಲ್ಲಿ ಪಾಠ ಅರ್ಥವಾಗದಿದ್ದರೂ ” ಎಲ್ಲರೂ ನಗುತ್ತಾರೆ ” ಎಂದು ಸುಮ್ಮನಿರುವ ವಿದ್ಯಾರ್ಥಿ ಪರೀಕ್ಷೆಯಲ್ಲಿ ಸೋಲುತ್ತಾನೆ. ಬಸ್‌ನಲ್ಲಿ ಮಹಿಳೆಯರಿಗೆ ಕಿರುಕುಳವಾದಾಗ ಸಂಕೋಚದಿಂದ ಎಲ್ಲರೂ ತಲೆತಗ್ಗಿಸಿದರೆ ಸಮಾಜದಲ್ಲಿ ಅನ್ಯಾಯ ತಾಂಡವವಾಡುತ್ತದೆ.ಅಷ್ಟೆಲ್ಲ ಏಕೆ ನಾನೇ ಸ್ವತಃ ಕಾಲೇಜ್ ಓದುವಾಗ ಸರಿಯಾಗಿ ಅರ್ಥ ವಾಗದೆ ಇದ್ದರೂ ಸಂಕೋಚ ದಿಂದ ಕೇಳದೆ ಗಣಿತ ವಿಷಯದಲ್ಲಿ ಫೇಲ್ ಆದೆ.

ಸಂಕೋಚವನ್ನು ಗೆಲ್ಲುವ ಉಪಾಯಗಳು.
ಸಂಕೋಚ ಹೋಗಲಾಡಿಸಲು ಸಾಧ್ಯವಿದೆ.
1) ದಿನಾ ಕನ್ನಡಿ ಮುಂದೆ ನಿಂತು “ನಾನು ಧೈರ್ಯವಂತ, ನಾನು ಮಾಡಬಲ್ಲೆ” ಎಂದು 10 ಬಾರಿ ಹೇಳಿಕೊಳ್ಳಬೇಕು.
2)ಎರಡನೆಯದು – ಸಣ್ಣ ಹೆಜ್ಜೆಗಳ ತಂತ್ರಮೊದಲು ಮನೆಯವರ ಮುಂದೆ, ನಂತರ 4-5 ಸ್ನೇಹಿತರ ಮುಂದೆ, ಆಮೇಲೆ ತರಗತಿಯಲ್ಲಿ ಮಾತನಾಡುವ ಅಭ್ಯಾಸ ಮಾಡಬೇಕು.
3)ಯಾವುದೇ ವಿಷಯದ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಭಯ ತಾನಾಗಿಯೇ ದೂರವಾಗುತ್ತದೆ.
4) ಸೋಲನ್ನು ಸ್ವೀಕರಿಸುವ ಮನೋಭಾವ ವೇದಿಕೆಯಲ್ಲಿ ತೊದಲಿದರೆ “ಕ್ಷಮಿಸಿ, ಮೊದಲ ಅನುಭವ” ಎಂದು ನಕ್ಕುಬಿಟ್ಟರೆ ಜನರು ಚಪ್ಪಾಳೆ ತಟ್ಟುತ್ತಾರೆ, ಅಪಹಾಸ್ಯ ಮಾಡುವುದಿಲ್ಲ.

ಉಪಸಂಹಾರ :
ಅಮೃತ, ಅತಿಯಾದರೆ ವಿಷ.ಹಾಗೆಯೇ ಸಂಕೋಚ ಹದಮಿರಬಾರದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದಂತೆ, “ಕನಸು ಕಾಣಿ, ಆದರೆ ಆ ಕನಸನ್ನು ನನಸು ಮಾಡಲು ಸಂಕೋಚ ಪಡಬೇಡಿ”.

ಆದ್ದರಿಂದ ಇಂದಿನಿಂದಲೇ ಪ್ರತಿಜ್ಞೆ ಮಾಡೋಣ – ಮರ್ಯಾದೆಗೆ ಬೆಲೆ ಕೊಡೋಣ, ಆದರೆ ಮುಜುಗರಕ್ಕೆ ಬಲಿಯಾಗಬಾರದು. ಸಂಕೋಚದ ಸಂಕೋಲೆಯನ್ನು ಕಳಚಿ, ಸಾಧನೆಯ ಮೆಟ್ಟಿಲುಗಳನ್ನು ಏರೋಣ. ಏಕೆಂದರೆ ಜೀವನ ಒಂದೇ ಸಲ, ಅದನ್ನು ಸಂಕೋಚದಲ್ಲಿ ಕಳೆದುಬಿಡುವುದು ದಡ್ಡತನ.

  • ಬಸವರಾಜ ಹುಗ್ಗಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!