ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಜೊತೆಗೆ ಮಾಧ್ಯಮವು ದೇಶದ ಆಡಳಿತ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡಲು ಮಹತ್ವದ ಪಾತ್ರ ವಹಿಸುತ್ತದೆ.
ಪತ್ರಿಕಾ ಮಾಧ್ಯಮವು ಕೇವಲ ಸುದ್ದಿ ಪ್ರಸಾರ ಮಾಡುವ ಸಾಧನವಾಗಿರದೆ ಸಮಾಜದ ಕಣ್ಣು, ಕಿವಿ ಮತ್ತು ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ. ಜನರ ಹಕ್ಕುಗಳನ್ನು ಕಾಪಾಡುವಲ್ಲಿ ಮತ್ತು ಸರ್ಕಾರದ ಕಾರ್ಯಗಳನ್ನು ಪರಿಶೀಲಿಸುವಲ್ಲಿ ಇದರ ಪಾತ್ರ ಅಪಾರವಾಗಿದೆ.
ಮೊದಲನೆಯದಾಗಿ ಪತ್ರಿಕಾ ಮಾಧ್ಯಮದ ಮುಖ್ಯ ಕಾರ್ಯವೇ ಮಾಹಿತಿ ಪಸರಿಸುವುದು. ದೇಶದ ಒಳಗೆ ಮತ್ತು ಹೊರಗೆ ನಡೆಯುವ ಘಟನೆಗಳನ್ನು ಜನರಿಗೆ ತಲುಪಿಸುವುದು ಇದರ ಪ್ರಮುಖ ಹೊಣೆಗಾರಿಕೆ. ರಾಜಕೀಯ ಆರ್ಥಿಕತೆ ಶಿಕ್ಷಣ, ಆರೋಗ್ಯ, ವಿಜ್ಞಾನ ಕ್ರೀಡೆ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಮಾಧ್ಯಮವು ಜನತೆಗೆ ತಿಳಿಸುತ್ತದೆ. ಇದರ ಮೂಲಕ ಜನರು ತಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಎರಡನೆಯದಾಗಿ ಮಾಧ್ಯಮವು ಸರ್ಕಾರದ ಮೇಲೆ ನಿಗಾ ವಹಿಸುವುದು (watchdog role) ಸರ್ಕಾರದ ಕಾರ್ಯಗಳಲ್ಲಿ ತಪ್ಪುಗಳು, ಭ್ರಷ್ಟಾಚಾರ ಅಥವಾ ದುರುಪಯೋಗ ಕಂಡು ಬಂದರೆ ಅದನ್ನು ಬಹಿರಂಗಪಡಿಸುವುದು ಮಾಧ್ಯಮದ ಪ್ರಮುಖ ಕರ್ತವ್ಯವಾಗಿದೆ. ಇದರಿಂದ ಸರ್ಕಾರದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಒತ್ತಡ ಉಂಟಾಗುತ್ತದೆ. ಹೀಗಾಗಿ ಮಾಧ್ಯಮವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಮೂರನೆಯದಾಗಿ ಪತ್ರಿಕಾ ಮಾಧ್ಯಮವು ಜನಮತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಂಪಾದಕೀಯಗಳು ಚರ್ಚೆಗಳು ವಿಶ್ಲೇಷಣೆಗಳ ಮೂಲಕ ಜನರ ಅಭಿಪ್ರಾಯಗಳನ್ನು ರೂಪಿಸುತ್ತದೆ. ಸಮಾಜದ ಪ್ರಮುಖ ವಿಷಯಗಳ ಬಗ್ಗೆ ಜನರಲ್ಲಿ ಚಿಂತನೆ ಮೂಡಿಸುವ ಮೂಲಕ ಜಾಗೃತಿ ಉಂಟುಮಾಡುತ್ತದೆ. ಚುನಾವಣೆಗಳ ಸಂದರ್ಭದಲ್ಲಿ ಜನರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ನಾಲ್ಕನೆಯದಾಗಿ ಮಾಧ್ಯಮವು ಜನರ ಹಕ್ಕುಗಳನ್ನು ರಕ್ಷಿಸುವ ಸಾಧನವಾಗಿದೆ. ಅನ್ಯಾಯ ಅಸಮಾನತೆ ದೌರ್ಜನ್ಯ ಇತ್ಯಾದಿ ಘಟನೆಗಳನ್ನು ಹೊರಗೆ ತಂದು ಪೀಡಿತರಿಗೆ ನ್ಯಾಯ ದೊರಕಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತದೆ.
ಕೊನೆಯದಾಗಿ, ಪತ್ರಿಕಾ ಮಾಧ್ಯಮವು ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು ಎಂಬ ಕಾರ್ಯವನ್ನೂ ನಿರ್ವಹಿಸುತ್ತದೆ. ಆರೋಗ್ಯ ಪರಿಸರ ಸಂರಕ್ಷಣೆ ಶಿಕ್ಷಣದ ಮಹತ್ವ ಮಹಿಳಾ ಸಬಲೀಕರಣ ಮೊದಲಾದ ವಿಷಯಗಳಲ್ಲಿ ಜನರಿಗೆ ಅರಿವು ಮೂಡಿಸುತ್ತದೆ. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಸುತ್ತದೆ.
ಇದಲ್ಲದೆ ಆಧುನಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯಿಂದ ಪತ್ರಿಕಾ ಮಾಧ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿದೆ. ಸಾಮಾಜಿಕ ಜಾಲತಾಣಗಳು ಆನ್‌ಲೈನ್ ಸುದ್ದಿವಾಹಿನಿಗಳು ಇತ್ಯಾದಿಗಳು ಮಾಹಿತಿ ಹಂಚಿಕೆಯನ್ನು ವೇಗವಾಗಿ ಮತ್ತು ವ್ಯಾಪಕವಾಗಿ ಮಾಡುತ್ತಿವೆ. ಆದರೆ ಇದರ ಜೊತೆಗೆ ಸುಳ್ಳುಸುದ್ದಿ ಮತ್ತು ತಪ್ಪುಮಾಹಿತಿಯಂತಹ ಸವಾಲುಗಳೂ ಎದುರಾಗುತ್ತಿವೆ. ಆದ್ದರಿಂದ ಮಾಧ್ಯಮವು ನಿಖರತೆ, ನೈತಿಕತೆ ಮತ್ತು ಜವಾಬ್ದಾರಿತನವನ್ನು ಪಾಲಿಸಬೇಕು.
ಒಟ್ಟಿನಲ್ಲಿ, ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವದ ಹೃದಯವಾಗಿದೆ. ಇದು ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಿ ನ್ಯಾಯ ಪಾರದರ್ಶಕತೆ ಮತ್ತು ಸಮಾನತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಾಧ್ಯಮವು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ನಿಭಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವವು ಬಲವಾಗಿ ಉಳಿಯುತ್ತದೆ ಎಂಬುವುದು ನನ್ನ ಆಶಯ.
- ಮೇಘರಾಜ ಪತ್ರಿಕೋದ್ಯಮ ವಿದ್ಯಾರ್ಥಿ, ಎಸ್ ಕೆ ಎನ್ ಜಿ ಕಾಲೇಜ್ ಗಂಗಾವತಿ.




















