ಕಲಬುರಗಿ/ ಕಾಳಗಿ:ತಾಲೂಕಿನಾದ್ಯಂತ ಗುರುವಾರ ಮಿಂಚಿನ ಸಂಚಾರ ಕೈಗೊಂಡ ವಿಧಾನ ಪರಿಷತ್ ಸದಸ್ಯ ಶಶಿಲ ನಮೋಶಿ ಅವರು, ಸರಕಾರಿ, ಅರೆಸರಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರ ಕುಂದು-ಕೊರತೆಗಳನ್ನಾಲಿಸಿದರು.
ಹಳೆ ಪಿಂಚಣಿ, ಮುಂಬಡ್ತಿ, ವರ್ಗಾವಣೆ, ಅತಿಥಿ ಶಿಕ್ಷಕರ ಸಂಬಳ, ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ಶಿಕ್ಷಕರು ತಮ್ಮ ಅಳಲುಗಳನ್ನು ಮುಂದಿಟ್ಟರು.
ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿ ತೋರಿಸಿ, ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕಷ್ಟ-ಸುಖಗಳಲ್ಲಿ ಸದಾಕಾಲ ಭಾಗಿಯಾಗಿ, ಸತತವಾಗಿ ಸಂಪರ್ಕದಲ್ಲಿರುವ ಏಕೈಕ ನಾಯಕರು ತಾವುಗಳು ಎಂದು ಪರಿಷತ್ತಿನ ಸದಸ್ಯ ಬಗ್ಗೆ ಶಿಕ್ಷಕ ಸಮೂಹ ಪ್ರಶಂಸೆ ವ್ಯಕ್ತಪಡಿಸಿದರು.
ಸರಕಾರಿ ಪ್ರೌಢ ಶಾಲೆ, ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಮಾಡಬೂಳ, ಕೋರವಾರ, ಗೋಟೂರ, ಸುಗೂರ(ಕೆ), ಕೋಡ್ಲಿ ಶಾಲೆಗಳನ್ನೊಳಗೊಂಡು ಸಂಜೆಯ ಹೊತ್ತನ ವರೆಗೂ ತಾಲೂಕಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾಳಗಿ ತಾಲೂಕು ಅಧ್ಯಕ್ಷ ಅನೀಲ ಗುತ್ತೇದಾರ, ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ವಿರೇಶ ಮಾಲೀಪಾಟಿಲ ಕಾಳಗಿ, ರಮೇಶ ರಾಠೋಡ, ಸಿದ್ದರೆಡ್ಡಿ ಸಂಗೋಳಗಿ, ವಿರೂಪಾಕ್ಷಯ್ಯ ಹಿರೇಮಠ, ಭಾಷಾಅಲಿ ಕೋಡ್ಲಿ, ಸಂಗಪ್ಪ ಅರಣಕಲ, ಅಂದಾಸ ಮದಾನೆ, ಮಹಾಂತೇಶ, ಶ್ರೀಶೈಲ ಹಿರೇಮಠ ಸೇರಿದಂತೆ ಅನೇಕರು ಜೊತೆಗಿದ್ದರು.
ವರದಿ : ಚಂದ್ರಶೇಖರ್ ಆರ್ ಪಾಟೀಲ್




















