ಹುಬ್ಬಳ್ಳಿ: ಶ್ರೀಕ್ಷೇತ್ರ ಸಿದ್ಧಾರೂಢ ಮಠಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಶ್ರೀಗಳ ಗದ್ದುಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು. ಭಕ್ತಿಭಾವದಿಂದ ಮಠದ ಪರಂಪರೆಯಂತೆ ವಿಶೇಷ ಪೂಜೆ ಸಲ್ಲಿಸಿದ ಅವರು, ಸಿದ್ಧಾರೂಢರ ಮಠವು ಧಾರ್ಮಿಕತೆಗೆ ಮಾತ್ರ ಸೀಮಿತವಾಗದೇ, ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಹಿಂದ ಚಳವಳಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ‘ಅಹಿಂದ 25 ಹೋರಾಟ – ಸಾಧನೆ ಮತ್ತು ಸಂಕಲ್ಪ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಬಳಿಕ ಸಚಿವರು ಮಠಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಠದ ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಸಚಿವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಸಚಿವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಸಹ ತಂದೆಯೊಂದಿಗೆ ಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಅವರನ್ನು ಕೂಡ ಮಠದ ವತಿಯಿಂದ ಸನ್ಮಾನಿಸಲಾಯಿತು.
ಯುವ ನಾಯಕರು ಇಂತಹ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗೆ ಸಹಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಚಿವರು ಹಾಗೂ ಅವರ ಪುತ್ರರ ಭೇಟಿಯಿಂದ ಮಠದ ಭಕ್ತರು ಮತ್ತು ಕಾರ್ಯಕರ್ತರಲ್ಲಿ ವಿಶೇಷ ಹರ್ಷದ ವಾತಾವರಣ ಕಂಡುಬಂದಿತು.
ವರದಿ ವಿಠ್ಠಲ ಖೋಕಾಟೆ




















