ಕೊಪ್ಪಳ: ಚಿತ್ರಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಕಲಾವಿದರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ಲಲಿತಕಲಾ ಅಕಾಡೆಮಿಯು ನೀಡುವ 2024-25ನೇ ಸಾಲಿನ ಪ್ರತಿಷ್ಠಿತ “ವರ್ಣಶ್ರೀ ಪ್ರಶಸ್ತಿ”ಗೆ ಕೊಪ್ಪಳ ಜಿಲ್ಲೆಯ ಖ್ಯಾತ ಕಲಾವಿದ ಬಿ. ತಿರುಪತಿ ಶಿವನಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ತಿರುಪತಿ ಶಿವನಗುತ್ತಿ ಅವರು ತಮ್ಮ ವೈಶಿಷ್ಟ್ಯಪೂರ್ಣ ಕಲಾಕೃತಿಗಳ ಮೂಲಕ ರಾಜ್ಯ ಮಟ್ಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
“ಅಣು ಅಣುವಿನಲ್ಲೂ ಅಂಬೇಡ್ಕರ್” ಎಂಬ ವಿಭಿನ್ನ ಪರಿಕಲ್ಪನೆಯಡಿ ಒಂದು ಲಕ್ಷಕ್ಕೂ ಅಧಿಕ ಬಾರಿ “ಅಂಬೇಡ್ಕರ್” ಎಂಬ ಪದವನ್ನು ಬರೆಯುವ ಮೂಲಕ ರಚಿಸಿದ ಭಾವಚಿತ್ರವು ಅವರ ಸೃಜನಶೀಲತೆಗೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೆ, ಅಕ್ಕಿ ಕಾಳುಗಳನ್ನು ಬಳಸಿ ರೂಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ, 6 ಅಡಿ × 4 ಅಡಿ ಅಳತೆಯ ಬೃಹತ್ ಸಂವಿಧಾನದ ಮಾದರಿ ಪುಸ್ತಕ ಸೇರಿದಂತೆ ಅನೇಕ ವಿನೂತನ ಕಲಾಕೃತಿಗಳನ್ನು ಅವರು ನಿರ್ಮಿಸಿದ್ದಾರೆ.
ಇವರು ನಿರಂತರವಾಗಿ ಚಿತ್ರಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸಮಾಜಮುಖಿ ಸಂದೇಶಗಳನ್ನು ತಮ್ಮ ಕಲೆಯ ಮೂಲಕ ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಕಲಾಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ರೂ. 25,000 ನಗದು, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ, ಶಾಲು, ಹಾರ ಮತ್ತು ತಾಂಬೂಲಗಳನ್ನು ಒಳಗೊಂಡಿದೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ ತಂಗಡಗಿ ಅವರ ನೇತೃತ್ವದಲ್ಲಿ ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು.
ಈ ಕುರಿತು ಮಾಹಿತಿ ನೀಡಿರುವ ಅಕಾಡೆಮಿ ಸದಸ್ಯ ವೆಂಕಟೇಶ್ ಬಡಿಗೇರ ಅವರು, ತಿರುಪತಿ ಶಿವನಗುತ್ತಿ ಅವರ ಸಾಧನೆ ಯುವ ಕಲಾವಿದರಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- ಕರುನಾಡ ಕಂದ ಪತ್ರಿಕೆ



















