
ಬಳ್ಳಾರಿ / ಕಂಪ್ಲಿ: ಆಧುನಿಕ ತಂತ್ರಜ್ಞಾನದಲ್ಲಿ ಪತ್ರಿಕೆಗಳ ಸ್ವರೂಪ ಸಂಪೂರ್ಣ ಬದಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಜೂಗಲ್ ಮಂಜುನಾಯಕ ಅಭಿಪ್ರಾಯ ಪಟ್ಟರು. ಅವರು ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕವು ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಎ ಐ ತಂತ್ರಜ್ಞಾನದಲ್ಲಿ ಪತ್ರಿಕೆಗಳ ಸ್ವರೂಪ ಬದಲಾಗಿದೆ. ಪತ್ರಿಕೆ ಕೇವಲ ಮಾಹಿತಿ ಕೊಡುವ ಮಾಧ್ಯಮ ಆಗಿಲ್ಲ. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪ್ರೇರೇಪಿಸಿ ದೇಶವಾಸಿಗಳನ್ನು ಒಟ್ಟುಗೂಡಿಸಲು ಪತ್ರಿಕೆಗಳು ಮಹತ್ವದ ಪಾತ್ರವಹಿಸಿದ್ದವು. ಪತ್ರಿಕೆ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದ್ದು, ಸಾಮಾನ್ಯ ಜನರ ಪ್ರತಿಧ್ವನಿಯಾಗಿದೆ. ಪಟ್ಟಣದ ಪತ್ರಕರ್ತರು ನಿಖರ ಮಾಹಿತಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸುದ್ದಿ ಪ್ರಕಟಿಸುವ ಮೊದಲು ಸೂಕ್ತವಾಗಿ ಪರಿಶೀಲಿಸಿ ಪ್ರಕಟಿಸಲು ಪತ್ರಕರ್ತರು ಮುಂದಾಗಬೇಕು. ಪ್ರಚಲಿತ ವಿದ್ಯಮಾನ, ಜ್ಞಾನ ವೃದ್ಧಿಗೆ ಪತ್ರಿಕೆಗಳು ಸಹಕಾರಿಯಾಗಿವೆ. ಪತ್ರಿಕೆ ಮಾಹಿತಿ ನೀಡುವ ಪೇಪರ್ ಅಲ್ಲ ಸಮಾಜದ ಧ್ವನಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಪತ್ರಿಕೋಧ್ಯಮದ ಬೆಳವಣಿಗೆ ಮಂಗಳೂರು ಸಮಾಚಾರ ಬಳ್ಳಾರಿಯಿಂದಲೇ ಶುರುವಾಯಿತು. ಸೋಶಿಯಲ್ ಮೀಡಿಯಾದಲ್ಲಿನ ಎಲ್ಲ ಸುದ್ದಿಗಳು ನಿಜವಲ್ಲ. ಪತ್ರಿಕೆಗಳು ನಿಖರ ಸುದ್ದಿ ಕೊಡುವಲ್ಲಿ ಮುಂದಾಗಿವೆ. ಸುದ್ದಿ ಖಚಿತಪಡಿಸಿಕೊಂಡ ಮೇಲೆ ಪ್ರಕಟಿಸಲು ವರದಿ ನೀಡಬೇಕು. ಸರಿಯಾದ ಸುದ್ದಿ, ಮಾಹಿತಿಗಳನ್ನು ಪತ್ರಿಕೆಗಳಿಗೆ ನೀಡುವುದು ಪತ್ರಕರ್ತರ ಹೊಣೆಯಾಗಿದೆ. ಉನ್ನತ ಶಿಕ್ಷಣ, ಹುದ್ದೆ ಗಳಿಸಲು ಪ್ರಚಲಿತ ವಿದ್ಯಮಾನ ಅರಿಯಲು ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿತ್ಯ ಓದುವುದು ಉತ್ತಮ. ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ ಅರಿಯಲು ಸಾಧ್ಯವಾಗುತ್ತದೆ. ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಅದನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದರು.
ನವ ಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಮಾತನಾಡಿ, ಸಂವಹನ ಮತ್ತು ಸಂಪರ್ಕ ಮಾಧ್ಯಮಗಳ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಬ್ರೇಕಿಂಗ್ ನ್ಯೂಸ್ ಕೊಡುವಲ್ಲಿ ಮಾಧ್ಯಮಗಳು ಮುಂದೆ ಇವೆ. ಖಚಿತವಾದ ಸುದ್ದಿ ಪಡೆಯಲು ದಿನಪತ್ರಿಕೆ ಓದಬೇಕು ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಸಂಪಾದಕರ ಕಾಲಂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಭಾಷಾಜ್ಞಾನ, ಬರವಣಿಗೆ ಕೌಶಲ್ಯಗಳಿಸಲು ಸಾಧ್ಯ. ಪತ್ರಿಕೆ ಓದುವುದರಿಂದ ದೇಶದ ಪರಿಸ್ಥಿತಿ ಅರಿವು ಆಗುತ್ತದೆ ಎಂದು ಹೇಳಿದರು.
ಕಕಾನಿಪ ಸಂಘದ ತಾಲೂಕು ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಅಧ್ಯಕ್ಷತೆ ವಹಿಸಿದರು.
ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಸಾಯಿನಿಧಿ, ಆರ್.ಹರ್ಷಿಣಿ, ವಿನುತಾ ಸೊಪ್ಪಿಮಠ, ನಸ್ರೀನ್ತಾಜ್, ಅಭಿನಂದನ್, ಉತ್ತಮ ದೈಹಿಕ ಶಿಕ್ಷಕ ಎಂ.ಎಂ.ಶರಣಬಸವರಾಜರನ್ನು ಗೌರವಿಸಲಾಯಿತು.
ಕಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ವಿದ್ಯಾಸಾಗರ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾಚಾರ್ಯರಾದ ರೋಹಿಣಿ ಸಾಯಿಕಿಶೋರ್, ಅಧಿಕಾರಿಗಳಾದ ಎಎಸ್ಐ ಬಸವರಾಜ, ತಾ.ಪಂ. ಕಚೇರಿಯ ಗುರುಪ್ರಸಾದ್, ಟಿ.ಎಂ.ಬಸವರಾಜ, ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಸದಸ್ಯ ಜಿ.ಚಂದ್ರಶೇಖರಗೌಡ, ತಾಲೂಕು ಕಾರ್ಯದರ್ಶಿ ಪಿ.ವೀರೇಶ್, ತಾಲೂಕು ಘಟಕ ಪದಾಧಿಕಾರಿಗಳಾದ ಕರಿ ವಿರುಪಾಕ್ಷಿ, ಎಸ್.ಯಮನಪ್ಪ, ಜೀರು ಗಾದಿಲಿಂಗ, ಎಂ.ಎಸ್.ವಿರುಪಾಕ್ಷಯ್ಯ, ಎಚ್.ಎಂ.ಪಂಡಿತಾರಾಧ್ಯ, ಬಿ.ರಸೂಲ್, ಬಿ.ಎಚ್.ಎಂ. ಗುರುಶಾಂತ ಶಾಸ್ತ್ರಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















