ಚಿಟಗುಪ್ಪಾ: ತಾಲೂಕಿನ ರಾಂಪುರ್ ಗ್ರಾಮದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಮಹಾ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಭವ್ಯವಾದ ಅಶ್ವಾರೂಢ ಮೂರ್ತಿ ಅನಾವರಣ ಕಾರ್ಯಕ್ರಮ ದಿನಾಂಕ 12.05.2026 ರಂದು ಹಮ್ಮಿಕೊಳ್ಳಲಾಗಿದೆ.
ಆ ದಿನ ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯವಾದ ಮೆರವಣಿಗೆ ಜರುಗಲಿದ್ದು, ತದನಂತರ ಸಾಯಂಕಾಲ 6:30 ಗಂಟೆಗೆ ಮೂರ್ತಿ ಅನಾವರಣ ಸಮಾರಂಭ ನಡೆಯಲಿದೆ.
ಗಣ್ಯಾತಿಗಣ್ಯರ ಉಪಸ್ಥಿತಿ: ಬಸವಣ್ಣನವರ ಮೂರ್ತಿ ಅನಾವರಣವನ್ನು ಪೂಜ್ಯ ಶ್ರೀ ನಾಡೋಜ ಶ್ರೀ ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ, ಬಸವಕಲ್ಯಾಣ ರವರಿಂದ ನೆರವೇರಿಸಲಾಗುತ್ತದೆ.
ಸಾನಿಧ್ಯವನ್ನು ಅಕ್ಕ ಗಂಗಾಂಬಿಕೆ ಪಾಟೀಲ್, ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷರು, ಬೀದರ್ ಹಾಗೂ ಶ್ರೀ ಮ. ನಿ. ಪ್ರ. ಶಿವಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಲಿಂಗೇಶ್ವರ ವಿರಕ್ತ ಮಠ, ಖೇಳಗಿ ಹಾಗೂ ಚಿಟಗುಪ್ಪ ತಾಲೂಕಿನ ಬಸವ ತತ್ವ ಪ್ರಚಾರಕರಾದ ಅಕ್ಕ ಇಂದುಮತಿ ಗಾರಂಪಳ್ಳಿ ಅಕ್ಕನವರು ಸೇರಿದಂತೆ ಅನೇಕರು ವಹಿಸಲಿದ್ದಾರೆ.
ವೈಚಾರಿಕತೆಯೊಂದಿಗೆ ಅರ್ಥಪೂರ್ಣ ಕಾರ್ಯಕ್ರಮ : ಅನೇಕರ ಸಮ್ಮುಖದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಾಗೂ ವೈಚಾರಿಕವಾಗಿ ಸಾಗಲಿದೆ ಎಂದು ಸಂಚಾಲಕ ಜಗದೀಶ್ ಮೂಲಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಯಕ-ದಾಸೋಹದ ಸಂಕೇತ : ಅಶ್ವಾರೂಢ ಬಸವಣ್ಣನವರ ಕೇವಲ ಮೂರ್ತಿಯಲ್ಲ. ಅದು ಕ್ರಾಂತಿಯ ಸಂಕೇತ, ಸಮಾನತೆಯ ದ್ಯೋತಕ, ಕಾಯಕ-ದಾಸೋಹದ ಸಂದೇಶ. ಬಸವಣ್ಣನವರು ಕುದುರೆ ಏರಿದ್ದು ಯುದ್ಧ ಮಾಡಲಿಕ್ಕಲ್ಲ, ಅಜ್ಞಾನ, ಮೌಢ್ಯ, ಅಸಮಾನತೆಯ ವಿರುದ್ಧ ಹೋರಾಡಲು.
ರಾಂಪುರ್ ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಈ ಭವ್ಯ ಮೂರ್ತಿ ಮುಂದಿನ ಪೀಳಿಗೆಗೆ ಬಸವ ತತ್ವದ ದಾರಿದೀಪವಾಗಲಿ.ಇಡೀ ಗ್ರಾಮ ಕಲ್ಯಾಣದ ಅನುಭವ ಮಂಟಪವಾಗಲಿ. ಕಾರಣ ಎಲ್ಲಾ ಬಸವ ಭಕ್ತರು, ಶರಣ ಬಂಧುಗಳು ಮೇ 12 ರಂದು ರಾಂಪುರ್‌ಗೆ ಆಗಮಿಸಿ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
- ಕರುನಾಡ ಕಂದ ಪತ್ರಿಕೆ



















