ಬಳ್ಳಾರಿ / ಕಂಪ್ಲಿ : ಸಮಾಜಮುಖಿ ಕಾರ್ಯಗಳೊಂದಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಡಾ.ಸಂಜೀವ ಎಂ. ಮುದ್ರಿ ಹೇಳಿದರು.
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠ ಶಾಲಾ ಆವರಣದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ, ರಾಣೇಬೆನ್ನೂರು ಲಕ್ಷಿ ಸರ್ಜಿಕಲ್ ಟ್ರಾಮಾ ಅಥೋ ಮಲ್ಟಿಸ್ಪೆಷಟಾಲಿಟಿ ಆಸ್ಪತ್ರೆ (ಡಾ.ಮುದ್ರಿ ಆಸ್ಪತ್ರೆ) ಇವರ ಸಹಯೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊಣಕಾಲು ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಆಪರೇಷನ್‌ಗಳಾಗಿ ವಿಶೇಷ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವೂ ಪ್ರತಿಯೊಬ್ಬರ ಜೀವನದಲ್ಲಿ ಅತಿಮುಖ್ಯವಾಗಿದೆ. ಆದ್ದರಿಂದ ವಯಸ್ಸಾದ ಮನುಷ್ಯರ ಮೊಣಕಾಲು ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆಗೆ ಸಂಬಂಧಿಸಿಡಂತೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡು ಉತ್ತಮ ಜೀವನದ ಕಡೆಗೆ ಸಾಗಬೇಕು ಎಂದರು.
ನಂತರ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಲ್ಲಿ ಆರೋಗ್ಯಕ್ಕೆ ಸಂಬಂಧಿಸಿಡಂತೆ ಎಲುಬು, ಕೀಲು ಚಿಕಿತ್ಸೆಗೆಗಾಗಿ ವಿಶೇಷವಾಗಿ ಉಚಿತವಾಗಿ ಶಿಬಿರ ಆಯೋಜನೆ ಮೂಲಕ ಜನರಿಗೆ ಅನುವು ಮಾಡಿಕೊಟ್ಟಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಬೇಕು. ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಗ್ರಾಮೀಣ ಭಾಗದಲ್ಲಿ ಮಹಿಳಾ ಮಂಡಳಿಗಳನ್ನು ರಚಿಸಿ, ಹಳ್ಳಿಗಳಲ್ಲಿ ಸಮಾಜ ಸೇವೆಗೆ ಮುಂದಾಗಬೇಕು ಎಂದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದ ಜಗನ್ನಾಥ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಶಿಬಿರದಿಂದ ಜನತೆಗೆ ಬಹಳಷ್ಟು ಅನುಕೂಲ ಮಾಡಿಕೊಡುವ ಮೂಲಕ ಸಮಾಜಸೇವೆ ಮಾಡಲಾಗುತ್ತಿದೆ ಎಂದರು.
ನಂತರ ದೀರ್ಘ ಕಾಲದ ಮೊಳಕಾಲು ನೋವು, ಚಪ್ಪೆ ನೋವು, ಸೊಂಟ ಸೇರಿದಂತೆ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಮೂಲಕ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಿಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ, ಅಕ್ಕಮಹಾದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಕಾಮಗಂಡಿ ಲಕ್ಷ್ಮಿ, ಉಪ ಕಾರ್ಯದರ್ಶಿ ಸುಮಂಗಲಾ, ಖಜಾಂಚಿ ಸಿಂಧೂ ಎಸ್.ಚಂದ್ರಶೇಖರಗೌಡ, ಮುಖಂಡರಾದ ವಾಲಿ ಕೊಟ್ರಪ್ಪ, ರುದ್ರಪ್ಪ, ಡಾ.ಜಗನ್ನಾಥ ಹಿರೇಮಠ, ಘನಮಠಶಾಸ್ತ್ರೀ, ಕೆ.ಎಂ.ವಾಗೀಶ್, ಎಸ್.ಡಿ.ಬಸವರಾಜ, ಸುಜಾತ, ಅರವಿ ಅನುಪಮಾ, ಕೋರಿ ಜಯ, ಮುಕ್ಕುಂದಿ ಶಿವಗಂಗಮ್ಮ, ಕೆ.ನಾಗರತ್ನ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್


















