ಬಳ್ಳಾರಿ / ಕಂಪ್ಲಿ : ನೇಕಾರ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಸರ್ಕಾರ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡವುದರ ಜೊತೆಗೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಬಳ್ಳಾರಿ ಜಿಲ್ಲಾ ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ದೇವಾನಂದ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೇಕಾರ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 50 ರಿಂದ 60 ಲಕ್ಷ ಜನಸಂಖ್ಯೆಯಿದೆ. ಜಿಲ್ಲೆಯ ತಾಲೂಕುಗಳಾದ ಕಂಪ್ಲಿ, ಸಂಡೂರು, ಕುರುಗೋಡು ಮತ್ತು ಸಿರುಗುಪ್ಪದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ನಮ್ಮ ಸಮುದಾಯ ನೇಕಾರ, ದೇವಾಂಗ, ಪದ್ಮಸಾಲಿ, ತೋಗಟಿವೀರ, ಕುರುಹಿನಶೆಟ್ಟಿ ಸೇರಿದಂತೆ 40ಕ್ಕೂ ಹೆಚ್ಚಿನ ಉಪಪಂಗಡಗಳನ್ನು ಒಳಗೊಂಡಿದೆ. ಸಮುದಾಯಕ್ಕೆ ಸರ್ಕಾರದಿಂದ ಸೌಲಭ್ಯಗಳು ಮರೀಚಿಕೆಯಾಗಿವೆ. ಅದಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮುದಾಯದ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೇವೆ. ಮೊದಲಿಗೆ ಸಮುದಾಯದಲ್ಲಿ ಒಗ್ಗೂಡಿಸಿ ಪ್ರದರ್ಶನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಒಗ್ಗಟ್ಟು, ಸಂಘಟನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ನೇಕಾರ ಒಕ್ಕೂಟದ ಮಹಿಳಾ ಅಧ್ಯಕ್ಷೆ ಸಂಯುಕ್ತ ಮಿಟ್ಟೆ, ಬಳ್ಳಾರಿ ಜಿಲ್ಲಾ ನೇಕಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಿಟ್ಟೆ ಸಂಯುಕ್ತ ಮೂರ್ತಿ, ಬಳ್ಳಾರಿ ತಾಲೂಕು ನೇಕಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಮಾ ರಾಜು ಮಿಟ್ಟೆ, ಕುರುಹಿನಾ ಕೇಂದ್ರ ಸಂಘದ ನಿರ್ದೆಶಕ ಸುರೇಶ ಜುಟ್ಲ್, ಮುಖಂಡರಾದ ರಾಜು ಮಿಟ್ಟೆ, ನೇಕಾರ ಸಮುದಾಯ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















