ಸಿಂಧನೂರು : ಶಾಲಾ ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಬಹಳ ಮುಖ್ಯವಾಗಿದ್ದು ಮಕ್ಕಳಲ್ಲಿ ಶಿಸ್ತು ಮತ್ತು ಸೇವಾ ಭಾವನೆಯನ್ನು ಮೂಡಿಸಲು ಸ್ಕೌಟ್ ಮತ್ತು ಗೈಡ್ಸ್ ತುಂಬಾ ಸಹಕಾರಿಯಾಗುತ್ತದೆ ಎಂದು ಸಿಂಧನೂರು ಸಿಂಧನೂರು ತಾಲೂಕಾ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಎಸ್ ಶರಣೇಗೌಡ ಅಭಿಪ್ರಾಯಪಟ್ಟರು.
ಅವರು ಶನಿವಾರದಂದು ನಗರದ ಪಿಎಂ ಶ್ರೀ ಆದರ್ಶ ವಿದ್ಯಾಲಯದಲ್ಲಿ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ಕೌಟ್ ಮತ್ತು ಗೈಡ್ಸ್ ನ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 19ನೇ ಶತಮಾನದಲ್ಲಿ ಕೆಲವೇ ವಿದ್ಯಾರ್ಥಿಗಳ ಸೇವೆಯಿಂದ ಅಸ್ತಿತ್ವಕ್ಕೆ ಬಂದ ಸ್ಕೌಟ್ ಪರಿಕಲ್ಪನೆಯು ಇಂದು ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿ ಸ್ಕೌಟ್ ಮತ್ತು ಗೈಸ್ ತಂಡಗಳು ಅಸ್ತಿತ್ವದಲ್ಲಿರುವುದು ಇದರ ಹೆಮ್ಮೆಯನ್ನು ತೋರಿಸುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಹು ಮುಖ್ಯವಾಗಿದ್ದು, ಮುಂದಿನ ಶೈಕ್ಷಣಿಕ ಮತ್ತು ವೃತ್ತಿಯ ಬದುಕಿನಲ್ಲಿ ಮೀಸಲಾತಿಯನ್ನು ನೀಡುವ ಮೂಲಕ ಸಾಕಷ್ಟು ಉಪಯೋಗವಾಗಲಿದೆ. ಕಾರಣ ವಿದ್ಯಾರ್ಥಿಗಳು ಸ್ಕೌಟ್ ಮತ್ತು ಗೈಡ್ಸ್ ಘಟಕಕ್ಕೆ ಸೇರುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಯಚೂರು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ನ ಸಹಾಯಕ ಆಯುಕ್ತರಾದ ಬೀರಪ್ಪ ಶಂಭೋಜಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗಲಿವೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದು ಇನ್ನಷ್ಟು ಘಟಕಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು. ಕಳೆದ ಹಲವಾರು ವರ್ಷಗಳಿಂದ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಸ್ಕೌಟ್ ಘಟಕಗಳು ಮತ್ತು ಗೈಡ್ಸ್ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಜಿಲ್ಲೆ ಸೇರಿದಂತೆ ರಾಜ್ಯಮಟ್ಟದವರೆಗೂ ತಾಲೂಕಿನ ಘಟಕಗಳು ತಮ್ಮನ್ನು ತೊಡಗಿಸಿಕೊಂಡಿವೆ ಹಿಡಿದು ಎಂದು ಹೇಳುತ್ತಾ ಸ್ಕೌಟ್ ಮತ್ತು ಗೈಡ್ಸ್ ವಿಶ್ವದಲ್ಲಿ ಮತ್ತು ಭಾರತದಲ್ಲಿ ನಡೆದು ಬಂದ ದಾರಿಯ ಕುರಿತು ಮಕ್ಕಳಿಗೆ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ವೀರೇಶ ಗೋನವಾರ ಅವರು ಮಾತನಾಡುತ್ತಾ, ಸ್ಕೌಟ್ ಮತ್ತು ಗೈಡ್ಸ್ ಶಾಲಾ ಮಕ್ಕಳಲ್ಲಿ ಎಲ್ಲಾ ರೀತಿಯ ಸಮಾಜಮುಖಿ ಕೌಶಲ್ಯಗಳನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸೇವಾ ಮನೋಭಾವನೆಯನ್ನು ಮೂಡಿಸುವುದರ ಜೊತೆಗೆ ಆತ್ಮತೃಪ್ತಿಯನ್ನು ತಂದುಕೊಡುತ್ತದೆ. ಶಾಲಾ ವಿದ್ಯಾರ್ಥಿಗಳು ಸ್ಕೌಟ್ ಮತ್ತು ಗೈಡ್ಸ್ ಘಟಕಗಳನ್ನು ಸೇರಿಕೊಳ್ಳಲು ತುಂಬಾ ಆಸಕ್ತಿಯನ್ನು ತೋರುತ್ತಿದ್ದು ಶಾಲಾ ಶಿಕ್ಷಕರ ಮತ್ತು ಪಾಲಕರ ಸಹಕಾರದೊಂದಿಗೆ ಇನ್ನಷ್ಟು ಘಟಕಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಶಾಲಾ ಸ್ಕೌಟ್ ಮಾಸ್ಟರ್ ಜಡೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ವಿದ್ಯಾ ಪಬ್ಲಿಕ್ ಶಾಲೆಯ ಗೈಡ್ ಆರತಿ, ಶಾಲೆಯ ಶಿಕ್ಷಕರಾದ ಭೀಮರೆಡ್ಡಿ, ಬಸವರಾಜ, ಮೌನೇಶಪ್ಪ, ಮಲ್ಲಪ್ಪ ಕೆ, ಮೌನೇಶ, ಉಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















