ಬಳ್ಳಾರಿ / ಕಂಪ್ಲಿ : ಜನಗಣತಿ 2026ರಲ್ಲಿ ಮನೆ ಪಟ್ಟಿಕಾರ್ಯದ ಸಂಭಾವನೆ ಮತ್ತು ಹಾಜರಾತಿ ಪ್ರಮಾಣ ಪತ್ರವನ್ನು ನಗರ ಶಿಕ್ಷಕರಿಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಪುರಸಭೆಯ ಕಿರಿಯ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ವಸಂತ ಮಾತನಾಡಿ, ಜನಗಣತಿ 2026 ರ ಮನೆ ಪಟ್ಟಿ ಕಾರ್ಯವನ್ನು ಮುಗಿಸಿ ಹಲವು ತಿಂಗಳು ಕಳೆದಿವೆ. ಆದರೆ ಇದುವರೆಗೂ ಕಾರ್ಯನಿರ್ವಹಿಸಿದ ನಗರದ ಶಿಕ್ಷಕರಿಗೆ ಸಂಭಾವನೆ ಹಾಗೂ ಹಾಜರಾತಿ ಪ್ರಮಾಣಪತ್ರ ನೀಡಿಲ್ಲ. ಇದರಿಂದ ಶಿಕ್ಷಕರಿಗೆ ತೀವ್ರ ತೊಂದರೆಯಾಗಿದ್ದು, ಶೀಘ್ರವಾಗಿ ಸಂಭಾವನೆ ಮತ್ತು ಹಾಜರಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿದರು.
ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಪುರಸಭೆಯ ಕಿರಿಯ ಅಭಿಯಂತರರಾದ ತೇಜಸ್ವಿನಿರಿಗೆ ಮನವಿ ಸಲ್ಲಿಸಿದರು.
ಶಿಕ್ಷಕರ ಸಂಘದ ಪದಾಧಿಕಾರಿಗಳ
ಮನವಿ ಸ್ವೀಕರಿಸಿದ ಪುರಸಭೆಯ ಕಿರಿಯ ಅಭಿಯಂತರರಾದ ತೇಜಸ್ವಿನಿ ಅವರು ಶಿಕ್ಷಕರ ಮನವಿಯನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ನಾಗನಗೌಡ.ಎಂ.ಎ., ತಾಲೂಕು ಘಟಕದ ಗೌರವಾಧ್ಯಕ್ಷ ಚಂದ್ರ ಶೇಖರಶೆಟ್ರು, ಪದಾಧಿಕಾರಿಗಳಾದ ರೇವಣಸಿದ್ದೇಶ್, ಚಂದ್ರಯ್ಯ ಸೊಪ್ಪಿಮಠ, ಜೋಗಿ ರುದ್ರಪ್ಪನಾಯಕ, ಖಲೀಲ್, ಶಂಕರಮೂರ್ತಿ ಸೇರಿದಂತೆ ಇತರರು ಇದ್ದರು.
ವರದಿ :ಜಿಲಾನಸಾಬ್ ಬಡಿಗೇರ್




















