ತಾಲೂಕಿನ ಮಾಲೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಮಪ್ಪ ಬಿ. ಗುತ್ತೇರ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ಡಿಜಿ-ಐಜಿಪಿ ಪ್ರಶಂಸನಾ ಪದಕ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಿಜಿ-ಐಜಿಪಿ ಎಂ.ಎ. ಸಲೀಂ ಅವರು ರಾಮಪ್ಪ ಬಿ. ಗುತ್ತೇರ ಅವರಿಗೆ ಈ ಗೌರವ ಪದಕವನ್ನು ಪ್ರದಾನ ಮಾಡಿ ಅಭಿನಂದಿಸಿದರು.
ರಾಮಪ್ಪ ಬಿ. ಗುತ್ತೇರ ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸುತ್ತಿರುವ ಅಪ್ರತಿಮ ಹಾಗೂ ಅತ್ಯುತ್ತಮ ಸೇವೆ, ಕರ್ತವ್ಯ ನಿಷ್ಠೆ ಹಾಗೂ ಸಾರ್ವಜನಿಕರೊಂದಿಗಿನ ಸೌಹಾರ್ದಯುತ ಬಾಂಧವ್ಯವನ್ನು ಗುರುತಿಸಿ ಈ ಉನ್ನತ ಪ್ರಶಸ್ತಿಯನ್ನು ನೀಡಲಾಗಿದೆ. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧ ಕೃತ್ಯಗಳ ನಿಯಂತ್ರಣದಲ್ಲಿ ಅವರು ತೋರಿರುವ ದಕ್ಷತೆ ನಿಜಕ್ಕೂ ಶ್ಲಾಘನೀಯವಾಗಿದೆ.
ತಾಲ್ಲೂಕಿನಲ್ಲಿ ಕಳ್ಳತನ, ದರೋಡೆ, ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು ಕಳ್ಳರು, ರೌಡಿಶೀಟರ್‌ಗಳನ್ನು ಮಟ್ಟ ಹಾಕಿದ್ದಾರೆ. ದಲಿತ ದೌರ್ಜನ್ಯ ಸಭೆಗಳು ಕಾಲಕಾಲಕ್ಕೆ ನಡೆಸಿ ಅವರ ಮೇಲೆ ದೌರ್ಜನ್ಯಗಳು ಆಗಿದ್ದಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ರೈತಪರ, ದಲಿತಪರ, ವಿದ್ಯಾರ್ಥಿಪರ, ಕನ್ನಡಪರ ಸಂಘಟನೆಗಳು ಶುಭಹಾರೈಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಶಾಂತಿ ಮತ್ತು ಕಾನೂನು ವ್ಯವಸ್ಥೆ ಕಾಪಾಡುವ ಮೂಲಕ ಗಾಂಜಾ ಇಸ್ಪೀಟ್ ದಂಧೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ, ಕೋಳಿ ಪಂದ್ಯ, ವೇಶ್ಯಾವಾಟಿಕೆ ದಂಧೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ.
ಕ್ಷೇತ್ರದ ದಕ್ಷ ಅಧಿಕಾರಿಯೊಬ್ಬರಿಗೆ ಈ ಪ್ರತಿಷ್ಠಿತ ಗೌರವ ಲಭಿಸಿರುವುದು ಮಾಲೂರು ತಾಲೂಕಿನ ಜನತೆಗೆ ಒಟ್ಟಾರೆ ಹೆಮ್ಮೆಯ ವಿಷಯವಾಗಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ಸ್‌ಪೆಕ್ಟರ್ ರಾಮಪ್ಪ ಬಿ. ಗುತ್ತೇರ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇನ್ಸಪೆಕ್ಟರ್ ರಾಮಪ್ಪ ಬಿ.ಗುತ್ತೇರ ರವರಿಗೆ ಪ್ರತಿಷ್ಠಿತ ಡಿ.ಜಿ-ಐಜಿಪಿ ಪ್ರಶಂಸನ ಪದಕವನ್ನು ಪಡೆದಿರುವುದಕ್ಕೆ ವಿಶ್ವಮಾನವ ಕುವೆಂಪು ಫೌಂಡೇಶನ್ ವಿ.ಕೆ.ಎಫ್ ರಾಜ್ಯ ಅಧ್ಯಕ್ಷರು, ಯುವಕವಿಗಳಾದ ಲಕ್ಕೂರು ಎಂ.ನಾಗರಾಜ್ ರವರು ಶುಭ ಹಾರೈಸಿದ್ದಾರೆ.
- ಕರುನಾಡ ಕಂದ ಸುದ್ದಿ




















