ಬಳ್ಳಾರಿ / ಕಂಪ್ಲಿ : ಸಹ ಶಿಕ್ಷಕರಿಗೆ ಕಿರುಕುಳ, ಮಕ್ಕಳ ಶಾಲಾ ಶುಲ್ಕ, ಎಸ್ಸೆಸ್ಸೆಲ್ಸಿ ಪರೀಕ್ಷಾ ಹಾಲ್ ಟಿಕೆಟ್‌ನ ಆನ್‌ಲೈನ್ ಅರ್ಜಿ ನೆಪದಲ್ಲಿ ಹಣ ವಸೂಲಿ, ಹೀಗೆ ರಾಮಸಾಗರ ಪ್ರೌಢ ಶಾಲೆಯ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಅದ್ವಾನ ಮಾಡಿರುವಂತಹ ಮುಖ್ಯಶಿಕ್ಷಕಿ ಅರುಣ ಅವರನ್ನು ಸೇವೆಯಿಂದ ವಜಾ ಮಾಡುವ ಜೊತೆಗೆ ರಾಮಸಾಗರ ಶಾಲೆಯಿಂದ ಅವರನ್ನು ಸೇವೆಯಿಂದ ಹೊರ ಹಾಕುವ ಮೂಲಕ ಮುಕ್ತಿ ನೀಡಬೇಕೆಂದು ಶಾಲಾ ಎಸ್ ಡಿ ಎಂ ಸಿ ಯವರು ಸ್ಥಳೀಯ ಮುಖಂಡರು, ಪೋಷಕರು, ದಲಿತ ಸಂಘ-ಸಂಸ್ಥೆಯವರು ಆಗ್ರಹಿಸಿದರು.
ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸಿ , ಎಸ್ಟಿ ಸೇರಿದಂತೆ ಎಲ್ಲಾ ವರ್ಗದ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆ ಹುಟ್ಟಿದಾಗಿನಿಂದಲೂ ಶಾಲೆಗೆ ಕಳಂಕ ಬಂದಿದ್ದಿಲ್ಲ. ಆದರೆ, ಮುಖ್ಯಗುರುಗಳಾಗಿ ಅರುಣಾ ಅವರು ಶಾಲೆಗೆ ಬಂದ ದಿನದಿಂದಲೂ ಶಾಲೆಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಂಡು ಬಂದಿವೆ. ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಾ ಬಂದಿದ್ದಾರೆ. ಮಕ್ಕಳ ತರಗತಿಗೆ ಹೋಗಲ್ಲ. ಪಾಠ, ಪ್ರವಚನ ಇಲ್ಲದಂತಾಗಿದೆ. ಸರಿಯಾದ ಸಮಯಕ್ಕೆ ಬರುವುದಿಲ್ಲ. ಸಹ ಶಿಕ್ಷಕರ ಮೇಲೆ ಮಾನಸಿಕ ಕಿರುಕುಳ, ಶಾಲಾ ಶುಲ್ಕ ಬರೀ 80 ರೂ. ಇದೆ. ಆದರೆ, ನಕಲಿ ರಶೀದಿ ಬಳಸಿ, 480ಕ್ಕೂ ಹೆಚ್ಚು ಹಣ ವಸೂಲಿ ಮಾಡಿ, ನುಂಗಿದ್ದಾರೆ. 2025ರ ಡಿಸೆಂಬರ್ 21ರಂದು ಕುಡತಿನಿಗೆ ಕಾರ್ಯ ಹೊಂದಾಣಿಕೆ ಹಿನ್ನಲೆ ತೆರಳಬೇಕಾದವರೂ, ಏಳು ದಿನಗಳ ನಂತರ ಕಾರ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಮ್ ಮೋಹನ್ ಅವರು ಪ್ರಭಾರಿ ಮುಖ್ಯಗುರುಗಳಾದರೂ ಸಹ ಇವರಿಗೆ ಅಧಿಕಾರ ಹಸ್ತಾಂತರಿಸದೇ, ಗೋಳಾಡಿಸಿದ್ದಾರೆ. ಈಗ ಸುಗ್ಗೇನಹಳ್ಳಿ ರಮೇಶ್ ಅವರಿಗೆ ಪ್ರಭಾರಿ ಮುಖ್ಯಗುರು ಸ್ಥಾನವನ್ನು ಅಲಂಕರಿಸುವಂತೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಈಗಲೂ ಸಹ ಇವರಿಗೆ ಅಧಿಕಾರ ನೀಡುತ್ತಿಲ್ಲ. ಆದ್ದರಿಂದ ಇಂತಹ ಮುಖಶಿಕ್ಷಕಿ ಅರುಣಾ ಅವರನ್ನು ಸೇವೆಯಿಂದ ವಜಾ ಮಾಡಿ ಆದೇಶಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಎಸ್ಡಿಎಂಸಿ ಅಧ್ಯಕ್ಷ ಬಿ.ಎಂ.ಕರಿಬಸಯ್ಯಸ್ವಾಮಿ, ಅಂಜಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ಜೀವನಜ್ಯೋತಿ ಟ್ರಸ್ಟ್ ಅಧ್ಯಕ್ಷ ಅಂಕಲೇಶ, ಮುಖಂಡರಾದ ಮಹಾಂತೇಶ, ಹೆಚ್.ಕುಮಾರಸ್ವಾಮಿ, ಹುಲುಗಪ್ಪ, ರಾಜಾವಲಿ ಆಗ್ರಹಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಬಿ.ಎಂ.ಕರಿಬಸಯ್ಯಸ್ವಾಮಿ ಮಾತನಾಡಿ, ಇಲ್ಲಿನ ಪ್ರೌಢಶಾಲೆಯು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿತ್ತು. ಆದರೆ, ಮುಖ್ಯಗುರುಳಾಗಿ ಅರುಣಾ ಅವರು ಈ ಶಾಲೆಗೆ ಬಂದ ಮೇಲೆ ಮೂಲಭೂತ ಸೌಲಭ್ಯಗಳ ಕೊರತೆ ಜೊತೆಗೆ ಸಹ ಶಿಕ್ಷಕರಿಗೆ ಮಾನಸಿಕ ಕಿರುಕುಳ, ಸ್ವಚ್ಚ ಮಾಡದ ಶೌಚಗೃಹಗಳು, ಚಾಕ್‌ಮಿಸ್ ಸಮಸ್ಯೆ, ಕುಡಿಯುವ ನೀರಿನ ಗೋಳು, ಹೀಗೆ ನಾನಾ ಸಮಸ್ಯೆಗಳನ್ನು ಉದ್ಭವಿಸುವಂತೆ ಮಾಡಿದ್ದಾರೆ. ಇವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಕಳೆದ ಎಂಟು ತಿಂಗಳಿಂದ ಹಕ್ಕೊತ್ತಾಯ ಮಾಡಿಕೊಂಡು ಬಂದರೂ, ಮೇಲಾಧಿಕಾರಿಗಳ ಕುಮ್ಮಕ್ಕಿಯಿಂದ ಅರುಣಾ ಅವರು ಜಾರಿಕೊಳ್ಳುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ, ಸಹ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ಒಂದು ವಾರದೊಳಗೆ ಮುಖ್ಯಶಿಕ್ಷಕಿ ಅರುಣಾ ಅವರ ವಿರುದ್ಧ ಸೂಕ್ತಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪೋಕಷರ, ಮುಖಂಡರ, ಎಸ್ಡಿಎಂಸಿಯವರ, ಸಂಘ-ಸಂಸ್ಥೆಯವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಶಾಲೆಗೆ ಮುತ್ತಿಗೆ ಹಾಕಿ, ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.
ನಂತರ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮತ್ತು ದಲಿತ ಮುಖಂಡ ಆರ್.ಎಂ.ರಾಮಯ್ಯ ಮಾತನಾಡಿ, ಮುಖ್ಯಶಿಕ್ಷಕಿ ಅರುಣಾ ಅವರು ಸರಿಯಾಗಿ ಶಾಲೆಗೆ ಬರುವುದಿಲ್ಲ. ಇಲ್ಲಿನ ಶೌಚಾಲಯ ಅಸ್ವಚ್ಚತೆಯಿಂದ ಕೂಡಿದೆ. ರಾಜ್ಯಭಾರ ಮಾಡುತ್ತಿದ್ದಾರೆ. ಸಹ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಗಾಡವಾದ ಪರಿಣಾಮ ಬೀರುತ್ತಿದೆ ಎಂದರು.
ಸಹ ಶಿಕ್ಷಕಿ ಮಂಜುಳ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದರೂ, ಕೆಲವು ಸಲ ರಜೆ ಕೋರಿದಾಗ ರಜೆ ನೀಡದೇ, ಗೋಳಾಡಿಸಿದ್ದಾರೆ. ಪದೇ ಪದೇ ನೋಟೀಸ್ ನೀಡಿ, ಕಿರುಕುಳ ಕೊಟ್ಟಿದ್ದಾರೆ. ಇಷ್ಟು ವರ್ಷ ಸೇವೆ ಮಾಡಿಕೊಂಡು ಬಂದಿರುವೆ. ಆದರೆ, ಅರುಣಾ ಅವರು ಬಂದ ಮೇಲೆ ಶಿಕ್ಷಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಹೆಚ್ಚಾಗಿದೆ. ಇಂತವರು ಸರ್ಕಾರಿ ಸೇವೆ ಮಾಡಲು ಅನರ್ಹರು ಎಂದರು.
ವರದಿ : ಜಿಲಾನಸಾಬ್ ಬಡಿಗೇರ್




















