ಅರಕಲಗೂಡು ವಿಧಾನಸಭಾ ಕ್ಷೇತ್ರದ ಕೊಣನೂರು ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ಆಟೋ ಚಾಲಕರ ಬಹುದಿನಗಳ ಕನಸಾಗಿರುವ ಆಟೋ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಎ. ಮಂಜು ಅವರು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕೊಣನೂರು ಪಟ್ಟಣವು ವ್ಯಾಪಾರ, ಶಿಕ್ಷಣ ಹಾಗೂ ಸಾರಿಗೆ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ವಿವಿಧ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಸುಸಜ್ಜಿತ ಆಟೋ ನಿಲ್ದಾಣದ ಕೊರತೆಯಿಂದ ಆಟೋ ಚಾಲಕರು ಹಾಗೂ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಆಟೋ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದರು.
ಈ ಹಿನ್ನೆಲೆದಲ್ಲಿ ಶಾಸಕ ಎ. ಮಂಜು ಅವರು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೂಕ್ತ ಸ್ಥಳವನ್ನು ಅಂತಿಮಗೊಳಿಸಿ, ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳ ಪರಿಶೀಲನೆ ವೇಳೆ ಮಾತನಾಡಿದ ಶಾಸಕ ಎ. ಮಂಜು ಅವರು, ಕೊಣನೂರಿನಲ್ಲಿ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣವಾಗುವುದರಿಂದ ಆಟೋ ಚಾಲಕರಿಗೆ ಮೂಲಭೂತ ಸೌಲಭ್ಯಗಳು ದೊರೆಯಲಿದ್ದು, ಸಾರ್ವಜನಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಅಲ್ಲದೆ, ವಾಹನಗಳ ಅವ್ಯವಸ್ಥಿತ ನಿಲುಗಡೆಯಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
“ಆಟೋ ಚಾಲಕರು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆಟೋ ನಿಲ್ದಾಣ ನಿರ್ಮಾಣದಿಂದ ಚಾಲಕರಿಗೆ ವಿಶ್ರಾಂತಿ ಸ್ಥಳ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಶಾಸಕ ಎ. ಮಂಜು ಹೇಳಿದರು.
ಸ್ಥಳೀಯ ಆಟೋ ಚಾಲಕರು, ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವ ಶಾಸಕರಿಗೆ ಅಭಿನಂದನೆ ಸಲ್ಲಿಸಿ, ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




















